ವಿಸರಣೆ -
	ಅಣುಗಳ ಯಾದೃಚ್ಛಿಕ ಚಲನೆಯಿಂದಾಗಿ ಅಧಿಕ ಸಾರದ ಪ್ರದೇಶದಿಂದ ಕಡಿಮೆ ಸಾರದ ಪ್ರದೇಶಕ್ಕೆ ನಿವ್ವಳ ಅಣುಪ್ರವಹನ (ಡಿಫ್ಯೂಶನ್). ಪೆÇಟ್ಯಾಸಿಯಮ್ ಪಮ್ರ್ಯಾಂಗನೆಟ್ ಹರಳನ್ನು ನೀರಿನಲ್ಲಿರಿಸಿದಾಗ ಹರಳಿನ ಬಣ್ಣ ನಿಧಾನವಾಗಿ ಮೇಲೇರುವುದು, ಕಡಲಿನೊಳಗಿನ ಉಪ್ಪು ನದೀಪ್ರವಾಹದ ಎದುರಾಗಿ ಹರಡುವುದು, ಸುಗಂಧ ಸೀಸೆಯನ್ನು ತೆರೆದಾಗ ಕೋಣೆ ಪೂರ್ತಿ ಅದರ ಪರಿಮಳ ತುಂಬುವುದು-ಇವು ವಿಸರಣೆಗೆ ಕೆಲವು ಉದಾಹರಣೆಗಳು. ಉಕ್ಕಿನಲ್ಲಿ ಕಾರ್ಬನ್ ವಿಸರಣೆಯಿಂದ ಕಾರ್ಬನ್ ಉಕ್ಕು ಉಂಟಾಗುತ್ತದೆ.

	ಏಕಮಾನ ಸಲೆಯ ಮೂಲಕ ಏಕಮಾನ ಕಾಲದಲ್ಲಿ ಸಾಗುವ ಪದಾರ್ಥದ ಪ್ರಮಾಣಕ್ಕೆ ಪ್ರವಹನದರ ಅಥವಾ ವಿಸರಣದರ ಎಂದು ಹೆಸರು. ಏಕಮಾನ ದೂರದಲ್ಲಿ ಉಂಟಾಗುವ, ಪದಾರ್ಥದ ಸಾರವ್ಯತ್ಯಾಸ ವನ್ನು ಸಾರಪ್ರವಣತೆ (ಕನ್ಸೆಂಟ್ರೇಶನ್ ಗ್ರೇಡಿಯೆಂಟ್) ಎನ್ನುತ್ತಾರೆ. ಪ್ರವಹನದರ ಸಾರಪ್ರವಣತೆಗೆ ಅನುಲೋಮಾನುಪಾತದಲ್ಲಿದೆ. ಉಷ್ಣತೆ ಯೊಂದಿಗೆ ಈ ದರ ಹೆಚ್ಚುತ್ತದೆ. ಯಾವುವೇ ಎರಡು ಅನಿಲ ಕುರಿತಂತೆ ವಿಸರಣದರಗಳ ನಿಷ್ಪತ್ತಿ ಆ ಅನಿಲಗಳ ಸಾಂದ್ರತಾವರ್ಗಮೂಲಗಳ ನಿಷ್ಪತ್ತಿಯ ವಿಲೋಮ.

	ಉಷ್ಣವಹನದರ ಉಷ್ಣತಾಪ್ರವಣತೆಗೂ ವಾಹಕದಲ್ಲಿ ಹರಿಯುವ ವಿದ್ಯುತ್‍ಪ್ರವಾಹ ವಿದ್ಯುತ್ ವಿಭವದ ಪ್ರವಣತೆಗೂ ಅನುಲೋಮಾನು ಪಾತದಲ್ಲಿರುವುದು, ಇದು ವಿಸರಣದ ವಿದ್ಯಮಾನವನ್ನು ಹೋಲುತ್ತದೆ. 		
(ಎ.ಕೆ.ಬಿ.)

   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ